ಮರ್ಫಿ, ಜೇಮ್ಸ್ ಬಮ್ ಗಾಡ್ರ್ನರ್
1884-1950. ಅಮೆರಿಕದ ಪ್ರಸಿದ್ಧ ಏಡಿಗಂತಿತಜ್ಞ. ಉತ್ತರ ಕ್ಯಾರೊಲೀನ ಪ್ರಾಂತ್ಯದ ಮಾಗ್ರ್ಯಾನ್‍ಟನ್ ಎಂಬಲ್ಲಿ 1884 ಆಗಸ್ಟ್ 8ರಂದು ಜನಿಸಿದ. 1905ರಲ್ಲಿ ಅದೇ ಪ್ರಾಂತ್ಯದ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದ. ಅನಂತರ ಜಾನ್ಸ್ ಹಾಕಿನ್ಸ್ ವೈದ್ಯಶಾಲೆ ಸೇರಿ 1909ರಲ್ಲಿ ಎಂ.ಡಿ. ಡಿಗ್ರಿ ಗಳಿಸಿದ. ವೈದ್ಯ ವಿದ್ಯಾರ್ಥಿ ಆಗಿದ್ದಾಗಲೇ ಶಸ್ತ್ರಕ್ರಿಯೆಯಲ್ಲಿ ಇವನ ಕೈಚಳಕ ಪ್ರಕಾಶಿತವಾಗಿತ್ತು. 1910-50 ಅವಧಿಯಲ್ಲಿ ಈತ ಏಡಿಗಂತಿಗಳು ಮತ್ತು ದೇಹಕ್ರಿಯೆಯ ಮೇಲೆ ಅವುಗಳ ಪ್ರಭಾವ ಎಂಬ ವಿಚಾರವಾಗಿ ಸಂಶೋಧನೆ ನಡೆಸಿದ. ಕೊನೆಯ ಕೆಲವು ವರ್ಷಗಳಲ್ಲಿ ರಾಕಿಫೆಲ್ಲರ್ ಸಂಸ್ಥೆಯ ಆಡಳಿತಗಾರನಾಗಿದ್ದ.

ಏಡಿಗಂತಿಯ ಮೂಲ ಹಾಗೂ ಮುನ್ನಡೆ ಬಗ್ಗೆ 1910ರ ವೇಳೆಗೆ ವಿಶೇಷವೇನೂ ಗೊತ್ತಿರಲಿಲ್ಲ. ಆ ಕುರಿತು ಆಗ ವ್ಯಾಸಂಗ ಮಾಡುತ್ತಿದ್ದ (ಮತ್ತು ಬಹು ಕಾಲಾನಂತರ ಅದಕ್ಕಾಗಿಯೇ ನೊಬೆಲ್ ಪಾರಿತೋಷಕ ಪಡೆದ) ಪೆಯ್ಟನಕೌಸ್ ಎಂಬಾತ ಮರ್ಫಿಯನ್ನು ಅದೇ ರಂಗಕ್ಕೆ ಆಕರ್ಷಿಸಿದ. ಚಕನ್ ಸಾರ್ಕೋವi ಎಂ¨ ಕೋಳಿಮರಿ ಏಡಿಗಂತಿಯ ಕೋಶರಹಿತಸಾರವನ್ನು ಚುಚ್ಚುಮದ್ದಾಗಿ ನಿರೋಗಿ ಕೋಳಿಗಳಿಗೆ ಕೊಟ್ಟಾಗ ಅವುಗಳಲ್ಲಿ ಏಡಿಗಂತಿ ಕಂಡುಬರುತ್ತದೆ ಎಂದು ಕೌಸ್ ತೋರಿಸಲು ಸಮರ್ಥನಾದದ್ದು ಮರ್ಫಿಯ ಪೂರ್ವಭಾವಿ ಸಂಶೋಧನೆಯಿಂದಲೆ. ಏಡಿಗಂತಿ ಕೋಶಸಾರವನ್ನು ಹದಗೆಡದಂತೆ ಪಡೆಯುವ ವಿಧಾನವನ್ನು ಮರ್ಫಿ ಆವಿಷ್ಕರಿಸಿದ್ದ. ಮರ್ಫಿ ಬಳಸಿದ ವಿಧಾನ ಅನಂತರ ಕೋಶಸಾರವನ್ನು ಪಡೆಯುವ ಸಾರ್ವತ್ರಿಕ ವಿಧಾನವೇ ಆಯಿತು. ಅಲ್ಲದೆ ತತ್ತಿಯಲ್ಲಿ ಬೆಳೆಯುತ್ತಿರುವ ಕೋಳಿ ಮರಿಗೆ ಏಡಿಗಂತಿಸಾರವನ್ನು ಚುಚ್ಚುಮದ್ದಾಗಿ ಕೊಟ್ಟಲ್ಲಿ ತತ್ತಿಯಲ್ಲೇ ಏಡಿಗಂತಿಯ ಸೂಕ್ಷ್ಮಾಣುವೃದ್ಧಿ ಆಗುವುದೆಂದು ತೋರಿಸಿದ. ಮುಂದೆ ವೈರಸ್ಸುಗಳ ಸಂಶೋಧನವ್ಯಾಸಂಗಗಳಲ್ಲಿ ಇಂಥ ಕೃಷಿ ವಿಧಾನ ಬಹಳವಾಗಿ ಬಳಸುವÀಂತಾಯಿತು. 1923ರಲ್ಲಿ ಕೌಸ್ ವೈರಸ್ ಹಾಗೂ ಏಡಿಗಂತಿ ವ್ಯಾಸಂಗಕ್ಷೇತ್ರ ಬಿಟ್ಟು ಬೇರೆ ವ್ಯಾಸಂಗಗಳಲ್ಲಿ ಆಸಕ್ತನಾದ್ದರಿಂದ ಮುಂದೆ 2 ವರ್ಷ ಪರ್ಯಂತ ವೈರಸ್ ವ್ಯಾಸಂಗಗಳು ಮರ್ಫಿಯ ನೇತೃತ್ವದಲ್ಲೇ ಮುಂದುವರಿಯುವಂತಾಯಿತು. ಈ ದೀರ್ಘಕಾಲೀನ ವ್ಯಾಸಂಗಗಳಿಂದ ವಿಶದವಾದ ನಾಲ್ಕು ಪ್ರಮುಖ ವಿಷಯಗಳ ಬಗ್ಗೆ ಮರ್ಫಿ 1935ರಲ್ಲಿ ಜಾನ್ಸ್ ಹಾಪ್‍ಕಿನ್ಸ್ ವೈದ್ಯಶಾಲೆಯಲ್ಲಿ ಕೊಟ್ಟ ಉಪನ್ಯಾಸದಲ್ಲಿ ವಿವರಣೆ ಇದೆ.

ಇಲಿಗಳ ಹಲವು ಏಡಿಗಂತಿಗಳನ್ನು ಬೇರೆ ಇಲಿಗಳಿಗೆ ನಾಟಿಮೂಲಕ ವರ್ಗಾಯಿಸಬಹುದು.

ಪ್ರಾಣಿಗಳು ಪದೇಪದೇ ಕೆಲವು ವಿಶಿಷ್ಟ ರಾಸಾಯನಿಕಗಳ ಪ್ರಭಾವಕ್ಕೆ ಈಡಾದಾಗ ಅವುಗಳಲ್ಲಿ ಏಡಿಗಂತಿ ಕಾಣಿಸಿಕೊಳ್ಳಬಹುದು
ಪ್ರಾಯೋಗಿಕವಾಗಿಯೋ ನೈಸರ್ಗಿಕವಾಗಿಯೋ ಏಡಿಗಂತಿಗೆ ಸುಲಭವಾಗಿ ಈಡಾಗುವ ಪ್ರಾಣಿಗಳು ಅನೇಕ ವೇಳೆ ಏಡಿಗಂತಿಯಿಂದಲೇ ಮೃತವಾದ ಪ್ರಾಣಿಗಳ ಸಂತತಿ.

ಕೋಳಿಮರಿಯ ನಾಟಿಹಾಕಬಲ್ಲ ಏಡಿಗಂತಿ ಸ್ತನಿಗಳಲ್ಲಿ ಕಾಣಬರುವ ಏಡಿಗಂತಿಯಂತೆಯೇ ಇರುತ್ತದೆ.

ಜೆ. ಬಿ. ಮರ್ಫಿ ಕುಶಲ ಆಡಳಿತಗಾರನಾಗಿಯೂ ಇದ್ದ. ಇದರಿಂದ ರಾಕಿಫೆಲ್ಲರ್ ಸಂಸ್ಥೆಯಲ್ಲಿ ಏಡಿಗಂತಿ ವಿಷಯವಾಗಿ ವ್ಯಾಸಂಗ ಜರುಗಿಸಲು ಸಾರ್ವಜನಿಕ ಸಹಕಾರ ಪಡೆಯಬಲ್ಲವನಾದ. ಏಡಿಗಂತಿಯನ್ನು ಆದಷ್ಟು ಬೇಗ ಪತ್ತೆ ಹಚ್ಚುವುದು ಮುಖ್ಯವೆಂದೂ ಅದರಿಂದ ಅದರ ಪ್ರಾರಂಭಿಕ ಲಕ್ಷಣಗಳನ್ನು ಸಾರ್ವಜನಿಕರು ಅರಿತುಕೊಳ್ಳಬೇಕೆಂದೂ ಸರಾಸರಿ ಹೇಳಿದ. ಏಡಿಗಂತಿ ಒಂದು ಕಳಂಕ ಎಂಬ ನಾಚಿಕೆ ಭಾವ ಸಲ್ಲದು. ಆದ್ದರಿಂದ ಯಾರೂ (ಮುಖ್ಯವಾಗಿ ಸ್ತ್ರೀಯರು) ರೋಗದ ವಿಷಯ ಬಚ್ಚಿಡಬಾರದು. ಹಾಗೆ ಮಾಡಿದರೆ ಅದು ಅವರಿಗೆ ಮಾರಕವಾಗದಿರದು ಎಂಬ  ಭಾವನೆಗಳು ಬೆಳಯುವಂತೆ ಹಲವಿಧವಾಗಿ  ಶ್ರಮಿಸಿದ. ತಾನೇ ಅನೇಕ ಕಡೆ ಪದೇ ಪದೇ ಭಾಷಣಗಳನ್ನು ಮಾಡಿ ಈ ವಿಷಯ ಒತ್ತಿ ಹೇಳುತ್ತಿದ್ದುದುಂಟು. ಮರ್ಫಿ ಅಮೆರಿಕದ ಕ್ಯಾನ್ಸರ್ ಸಂಶೋಧನ ಮಂಡಲಿ ಇತ್ಯಾದಿ ಸಂಸ್ಥೆಗಳ ಸಕ್ರಿಯ ಸದಸ್ಯನಾಗಿದ್ದು ಅನೇಕ ಸಾರ್ವಜನಿಕ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳಿಂದ ಸನ್ಮಾನಿಸಲ್ಟ. ರಾಕಿಫೆಲ್ಲರ್ ಸಂಸ್ಥೆಯಿಂದ ನಿವೃತ್ತನಾದ ಸ್ವಲ್ಪಕಾಲದಲ್ಲೆ 1950 ಆಗಸ್ಟ್ 21ರಂದು ಮೆಯ್ನ್ ಪ್ರಾಂತ್ಯದ ಬಾರ್ಬರ್ ಎಂಬಲ್ಲಿ ನಿಧನನಾದ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ